PRESIDENT'S MESSAGE for Singara Kannada Samskruthi Sammelana

ಸಮಸ್ತ ಕನ್ನಡ ಬಾಂಧವರಿಗೆ ನಮಸ್ಕಾರ, ಎಲ್ಲರಿಗೂ ನವರಾತ್ರಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ಕನ್ನಡ ಸಂಘ (ಸಿಂಗಪುರ)ಕ್ಕೆ ಈಗ 20ನೇ ವರ್ಷ, ತಾರುಣ್ಯ ಕಳೆಯನ್ನು ತುಂಬಿಕೊಂಡು, ನೈತಿಕವಾಗಿ ಬೆಳೆದು ಶಕ್ತಿ ಭರಿತಗೊಂಡಿದೆ. ಅನೇಕ ಕಾರ್ಯಕರ್ತರ, ಸದಸ್ಯರುಗಳ ಸಂಘದ ಜೊತೆಗಿನ ಅವಿನಾಭಾವ ಸಂಬಂಧವೇ ಕನ್ನಡ ಸಂಘ (ಸಿಂಗಪುರ)ದ ಸಾಮರ್ಥ್ಯ.

ಪೋಷಕರಂತೆ ನಾವೆಲ್ಲರೂ ಸಂಘವನ್ನು ಆರೈಕೆಮಾಡಿ ಬೆಳೆಸಿಕೊಂಡು ಬಂದಿದ್ದೇವೆ. ಸಂಘದ ಗೆಲ್ಗೆ-ಏಳ್ಗೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣೀಭೂತರಾದ ಎಲ್ಲರನ್ನೂ ಕೃತಜ್ಞತಾ ಪೂರ್ವಕವಾಗಿ ನೆನೆಯುವ ಸಂದರ್ಭ ಇದಾಗಿದೆ. ನಿರೀಕ್ಷೆಗೂ ಮೀರಿ 20ವರ್ಷಗಳ ಕಾಲ ಬಲಾಢ್ಯವಾಗಿ ಬೆಳದು ಯೌವನ ತುಂಬಿ ಠೀವಿಯಿಂದ ಮೆರಯುತ್ತಿರುವ ನಮ್ಮ ಕನ್ನಡ ಸಂಘ (ಸಿಂಗಪುರ)ದ ಮುಂದಿನ ನಡೆಗಳು ಸುಭದ್ರವಾಗಿ, ನಿಶ್ಚಲವಾದ ಗುರಿಯೊಡನೆ ಜವಾಬ್ದಾರಿಯುತವಾಗಿ ಸಾಗಬೇಕಾಗಿದೆ. ಇಂತಹ ಲಕ್ಷ್ಯ ಸಾಧನೆಯ ಬಗ್ಗೆ ಸಮಾನ ಮನಸ್ಸಿನೊಡನೆ ಚರ್ಚಿಸಲು ಕನ್ನಡ ಸಮ್ಮೇಳನ ಒಂದು ನಿಮಿತ್ತವಾಗುತ್ತದೆ.

ಸಮ್ಮೇಳನಗಳು ಒಂದು ಜಾತ್ರೆ, ವೈಭವ-ಆಡಂಬರಗಳೇ ಹೆಚ್ಚು, ವೃಥಾ ಖರ್ಚು ಎಂಬದು ಅನೇಕರ ಭಾವನೆಯಾದರೂ, ಗಾಢ-ಗಂಭೀರವಾಗಿ ಯೋಚಿಸಿದಾಗ ಇಂತಹ ಉತ್ಸವಗಳು ಆಗಿಂದ್ದಾಗೆ ನಡೆಯುತ್ತಿರಬೇಕು ಎಂಬುದು ಅಂತರಂಗದ ತುಡಿತ. "ಉತ್-ಸವ" ಎನ್ನುವ ಪದವೇ ಪ್ರಸ್ತುತ ಎಡೆಯಿಂದ ಮೇಲೆತ್ತುವುದು ಎಂಬ ಅರ್ಥವನ್ನು ಸೂಚಿಸುತ್ತದೆ. ಇಂತಹ ಜಾತ್ರೆಗಳಿಂದ ಮಾತ್ರವಲ್ಲದೆ ಸಂತೆಗಳಿಂದ ಪ್ರಯೋಜನಗಳುಂಟು ಎಂಬುದನ್ನು ಮರೆಯದಿರೋಣ. ಜಾತ್ರೆ ಎಂಬುದು 'ಯಾತ್ರೆ'ಯ 'ಸಂತೆ' ಎಂಬುದು 'ಸಂಸ್ಥೆ'ಯ ತದ್ಭವಗಳಷ್ಟೆ.

ಬದುಕು ಅಸತ್ತಿನಿಂದ ಸತ್ತಿನೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಅನಂತ ಯಾತ್ರೆಯಾಗಬೇಕು. ಸಾವಿರಾರು ಮೈಲಿಗಳಿಂದ ದೂರಬಂದಿರುವ ನಾವೆಲ್ಲರೂ ಒಂದು ಕಡೆ ಸೇರುವುದು,ಒಬ್ಬರನ್ನೊಬ್ಬರು ಭೇಟಿಯಾಗುವುದು, ಪರಸ್ಪರ ಮಾತಾನಾಡುವುದು ಈ ಉತ್ಸವದ ಫಲಗಳು. ಈಗಿನ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಎಂಬ 'ತ್ರಿಕರಣ'ಗಳ 'ಸುನಾಮಿ'ಯಲ್ಲಿ ಸಿಕ್ಕಿಕೊಂಡಿರುವ ನಮಗೆ, ಅಸಹಜ ಪ್ರಭಾವದಿಂದ ಪಾರಾಗಿ ನಮ್ಮ ಅನನ್ಯತೆಯನ್ನು, ಸ್ವಂತಿಕೆಯನ್ನು ಸ್ಥಾಪಿಸಬೇಕಾದರೆ ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಳ್ಳವುದು ಅವಶ್ಯ. ಕನ್ನಡ ಸಂಸ್ಕೃತಿ ಸಮ್ಮೇಳನ ಎನ್ನುವಲ್ಲಿ 'ಕನ್ನಡ ಸಂಸ್ಕೃತಿ' ಎಂಬುದು ಒಂದೇ ನಾಣ್ಯದ ಎರಡು ಮುಖದಂತೆ ಏಕಶಬ್ದಗ್ರಾಹಕವಾಗಿದೆ. ನಮ್ಮ ಕನ್ನಡ ಸಂಸ್ಕೃತಿಯನ್ನು ವಿಶ್ವದಾದ್ಯಂತ ಹರಡಿ ವಿರಾಜಿಸುವಂತೆ ಮಾಡುವ ಧ್ಯೇಯ ಹಾಗೂ ಸಾಧನೆಯ ಸಂಕಲ್ಪವನ್ನು ಈ ಸಮ್ಮೇಳನದ ಸಮಯದಲ್ಲಿ ಮಾಡಬೇಕಾಗಿದೆ. ನಾವು ಇನ್ನಷ್ಟು ಸಮಾಜಮುಖಿಯಾದ ಕೆಲಸಗಳನ್ನು ಹಮ್ಮಿಕೊಂಡು, ನಮ್ಮ ಮನಸ್ಸಿನ ಸಂತೋಷದ ಜೊತೆಗೆ, ನಮ್ಮ ಕಾರ್ಯಚಟುವಟಿಕೆಗಳನ್ನು ಇಮ್ಮಡಿಗೊಳಿಸಲು ಸಮ್ಮೇಳನಗಳು ಸಾಕ್ಷಿಯಾಗಬೇಕು.

ಪ್ರಸ್ತುತ ನಡೆಯುತ್ತಿರುವ "ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನ"ಕ್ಕೆ ತಮ್ಮಗೆಲ್ಲರಿಗೂ ಹೃದಯ ಪೂರ್ವಕವಾಗಿ ಸ್ವಾಗತವನ್ನು ಕೋರುತ್ತಿದ್ದೇನೆ. ನಾವು-ನೀವು ಈ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸೋಣ ಬನ್ನಿ. ಸಮ್ಮೇಳನದ ಕಂಪು ಈಗಾಗಲೇ ಎಲ್ಲೆಡೆ ಹರಡಿ ಅನೇಕ ಸಿಂಗನ್ನಡಿಗ ಸ್ವಯಂಸೇವಕರು ತನು-ಮನ-ಧನದಿಂದ ನಮ್ಮ ಸಂಸ್ಕೃತಿಗಾಗಿ ಪ್ರವೃತ್ತಿದಾಯಕದಿಂದ ಶ್ರಮಿಸುತ್ತಿದ್ದಾರೆ. ನೀವೆಲ್ಲರೂ ಈ ಸಮಾವೇಶದಲ್ಲಿ ಪಾಲ್ಗೊಂಡು ಸಮ್ಮೇಳನದ ಯಶಸ್ಸಿಗೆ ಪಾತ್ರರಾಗಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ. ನಿಮ್ಮ ಸಕ್ರಿಯ ಭಾಗವಹಿಸುವಿಕೆ ನಮಗೆ ಊರುಗೋಲು. ನಿಮ್ಮ ಕುಟುಂಬದ ಜೊತೆಗೆ, ನಿಮ್ಮ ಸ್ನೇಹಿತರನ್ನು ಕರೆತನ್ನಿ. ನಿಮ್ಮ ಬೆಂಬಲವೇ ನಮಗೆ ಆನೆಯಬಲ.

ಅಕ್ಟೋಬರ್ 29 ಹಾಗು 30ರಂದು ನಡೆಯಲಿರುವ ಎರಡು ದಿನಗಳ ಬೃಹತ್ ಸಮಾವೇಶದಲ್ಲಿ ನಮ್ಮ ಕನ್ನಡ ಭಾಷೆ, ಕನ್ನಡದ ಸಂಸ್ಕೃತಿ, ಕನ್ನಡದ ಸೊಬಗು-ಸೊಗಡು, ಬೆಡಗು-ಬೆರಗು,ಹಿರಿಮೆ-ಗರಿಮೆಗಳನ್ನು ಬಿಂಬಿಸುವ ಕಲೆಗಳ ಸಂಗಮ, ಜಾನಪದ ಮೆರವಣಿಗೆ, ನಾಟಕ, ಹಾಸ್ಯ, ರಸಮಯವಾದ ಕರ್ನಾಟಕವನ್ನು ಪ್ರತಿಬಿಂಬಿಸುವ ನೃತ್ಯ, ಗಾಯನ, ಕನ್ನಡ ಕಣ್ಮಣಿಯರನ್ನು ನೆನೆಪಿಸುವ ಸಂಗೀತ ಸಂಜೆಯಂತಹ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ಕಲಾವಿದರೊಂದಿಗೆ, ಕನ್ನಡ ನಾಡಿನ ಅನೇಕ ಕಲಾವಿದರು, ಪ್ರಸಿದ್ಧ ಸಾಹಿತಿಗಳು, ಗಣ್ಯರು, ಅತಿಥಿ-ಅಭ್ಯಾಗತರು, ಪ್ರಾಯೋಜಕರು ನಮಗೋಸ್ಕರ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಎಲ್ಲ ಕನ್ನಡಿಗರ ಅಭಿಮಾನದ ಹನಿಗಳು ಕೂಡಿ ನಾಲೆಯಾಗಿ,ನಾಲೆಯಿಂದ ಹೊಳೆಯಾಗಲಿ, ಹೊಳೆ ಹರಿದು ಕನ್ನಡವೆಂಬ ಸುಂದರ ಸಾಗರವನ್ನು ಸೇರಲಿ. ಎಲ್ಲ ಭಾಷೆಗಳನ್ನು ಪ್ರೀತಿಸೋಣ, ಆದರೆ ಕನ್ನಡ ಭಾಷೆಯನ್ನು ಆರಾಧಿಸೋಣ. ಎಲ್ಲೇ ಇದ್ದರೂ,ಒಳ್ಳೆಯ ಕನ್ನಡಿಗರಾಗಿ ಬದುಕೋಣ; ಬನ್ನಿ, ಒಟ್ಟಾಗಿ ಸೇರಿ ಕನ್ನಡದ ದೀಪವನ್ನು ಹಚ್ಚೋಣ, ಕನ್ನಡದ ಕೀರ್ತಿಯನ್ನು ಹೆಚ್ಚಿಸೋಣ, ಕನ್ನಡಾಂಬೆಯನ್ನು ಮೆರೆಸೋಣ.

Navarathri festival greetings to one and all. Kannada Sangha (Singapore), which has completed its early years and teens is entering into adulthood. With the combined effort of executive committee members, volunteers and well-wishers, Sangha continues to grow. With adulthood comes re-energized aspirations and increased responsibility.

Although superficially, it may seem that cultural conferences such as 'Sammelana' are ornate carnivals involving superfluous expenses, at the core, the intention of these Sammelanas is to uplift and rejuvenate cultural and social bonding within the community. The upcoming Singara Kannada Samskruthi Sammelana would serve several steps; to remind us about our responsibilities, engaging ourselves in a healthy discussion on next steps, rewards/recognitions, networking and celebration of Kannada Culture in a festive atmosphere.

Singara Kannada Samskruti Sammelana, a two-day cultural extravaganza on 29th and 30th October 2016, includes an attractive line-up of versatile programs ranging from Dance, Drama, Music, Literature, Folk and Humor and much more on both the event days. This Sammelana is a perfect opportunity for people to enjoy themselves and also to benefit from the networking. Several artists, dignitaries and sponsors from Karnataka and Singapore will be participating in this mega event. Let the drops of pride of every Kannadiga culminate into this Kannada cultural ocean. Let us love and respect all languages, but celebrate Kannada.

Come, let us light the 'Kannada lamp' and celebrate this cultural festival together. I invite you all to this mega event and look forward to seeing you all there.


ವಿಜಯ ರಂಗ ಪ್ರಸಾದ ಎನ್.ಎಸ್
ಅಧ್ಯಕ್ಷರು
ಕನ್ನಡ ಸಂಘ (ಸಿಂಗಪುರ)